ಟೆಸ್‍ರಾನ್ ಡು - ಬಾರ್
1855-1913.  ಫ್ರೆಂಚ್ ಪವನಶಾಸ್ತ್ರಜ್ಞ. ವಾಯುಮಂಡಲವು ಭೂಮೇಲ್ಮೈಯಿಂದ ಹಿಡಿದು ಅತ್ಯುನ್ನತ ಮಟ್ಟದ ವರೆಗೂ ಏಕರೂಪವಾಗಿಲ್ಲ. ಬದಲು ಅದರಲ್ಲಿ ಬೇರೆ ಬೇರೆ ಸ್ತರಗಳಿವೆಯೆಂದು ಮೊತ್ತ ಮೊದಲು ಗುರುತಿಸಿದವ. ಎಂಜಿನಿಯರನೊಬ್ಬನ ಮಗನಾದ ಟೆಸ್‍ರಾನನಿಗೆ (ಜನನ 5-11-1855) ಚಿಕ್ಕಂದಿನಿಂದಲೂ ವಾಯುಮಂಡಲದ ವಿದ್ಯಮಾನಗಳ ವಿಚಾರ ಆಸಕ್ತಿ ಇತ್ತು. ಮುಂದೆ ಈತ ಪ್ಯಾರಿಸಿನ ಕೇಂದ್ರ ಪವನ ಶಾಸ್ತ್ರಿಯ ಬ್ಯೂರೋದಲ್ಲಿ ಒಬ್ಬ ಸಾಮಾನ್ಯ ನೌಕರನಾಗಿ ಸೇರಿಕೊಂಡು 1892 ರಲ್ಲಿ ಅಲ್ಲೇ ಪವನಶಾಸ್ತ್ರಜ್ಞನಾದ. ಆದರೆ ತನಗಿಷ್ಟಬಂದ ಸಂಶೋಧನೆಗಳನ್ನು ನಡೆಸಲು ಅಧಿಕಾರಸ್ಥಾನದ ಕಟ್ಟುಪಾಡುಗಳು ಅಡ್ಡಿಯಾಗುವುವು ಎಂದು ವೇದ್ಯವಾದ್ದರಿಂದ 1896ರಲ್ಲಿ ಇವನು ಕೆಲಸಕ್ಕೆ ರಾಜೀನಾಮೆ ಕೊಟ್ಟ. ವರ್ಸೇಲ್ಸ್ ಬಳಿ ಸ್ವಂತ ಪವನಶಾಸ್ತ್ರೀಯ ವೀಕ್ಷಣಾಲಯ ಒಂದನ್ನು ಸ್ಥಾಪಿಸಿದ. ಅಲ್ಲಿ ಮಾನವರಹಿತ ಬಲೂನುಗಳು ನೆರವಿನಿಂದ ವಾಯುಮಂಡಲದ ಉನ್ನತ ಪ್ರದೇಶಗಳ ಸಂಶೋಧನೆಯನ್ನು ಕೈಗೊಂಡು ಈ ಕ್ಷೇತ್ರದ ಆದ್ಯಪ್ರವರ್ತಕರಲ್ಲೊಬ್ಬ ಎನ್ನಿಸಿಕೊಂಡ, ಸಮುದ್ರಮಟ್ಟದಿಂದ ಮೇಲಕ್ಕೆ ಹೋದಂತೆ ಕಡಿಮೆಯಾಗುತ್ತ ಹೋಗುವ ಉಷ್ಣತೆ ಏಳು ಮೈಲು ಎತ್ತರವನ್ನು ಮುಟ್ಟಿದ ತರುವಾಯ ಅಲ್ಲಿಂದ ಮುಂದೆ ಬದಲಾಯಿಸದೆ ಸ್ಥಿರವಾಗಿರುವುದೆಂಬುದನ್ನು ಶೋಧಿಸಿದ. ಉಷ್ಣತೆಯ ವ್ಯತ್ಯಾಸಗಳ ಕಾರಣ ವಾಯುರಾಶಿಗಳ ಚಲನವಲನ, ಮೋಡಗಳ ಉತ್ಪತ್ತಿ, ಮಳೆಗಾಳಿಗಳು ಮುಂತಾದ ಹವಾ ವ್ಯಾಪಾರಗಳು ಜರುಗುವ ಏಳು ಮೈಲು ದಪ್ಪದ ಈ ವಾಯುಸ್ತರಕ್ಕೆ 1908 ರಲ್ಲಿ ಟ್ರೋಪೋಸ್ಫಿಯರ್ (ಟ್ರೋಪೊ=ಬದಲಾವಣೆ) ಅಥವಾ ಪರಿವರ್ತ ಮಂಡಲ ಎಂಬ ಹೆಸರು ಕೊಟ್ಟವನು ಟೆಸ್‍ರಾನ್. ಈ ಸ್ತರದ ಮೇಲಣ ಗಡಿಗೆ ಟ್ರೋಪೊಪಾಸಿನ ಮೇಲ್ಗಡೆ ಉಷ್ಣತೆ ಮತ್ತಿತರ ಯಾವ ಬದಲಾವಣೆಗಳೂ ಆಗದಿರುವುದರಿಂದ ಆಕ್ಸಿಜನ್, ನೈಟ್ರೊಜನ್, ಹೀಲಿಯಮ್, ಹೈಡ್ರೊಜನ್ ಮುಂತಾದ ಅನಿಲಗಳು ತಮ್ಮ ಸಾಂದ್ರತೆಗಳಿಗೆ ಅನುಗುಣವಾಗಿ ವಿವಿಧ ಪದರಗಳಾಗಿ (ಕೆಳಗೆ ಆಕ್ಸಿಜನ್, ಅದರ ಮೇಲೆ ನೈಟ್ರೊಜನ್, ಅದರ ಮೇಲೆ ಹೀಲಿಯಮ್ ಮುಂತಾಗಿ) ಹಂಚಿಕೊಂಡಿರುವುದೆಂದು ಟೆಸ್‍ರಾನ್ ನಂಬಿದ್ದ.  ಆದಕಾರಣ ಆ ಅನಿಲಪ್ರದೇಶಕ್ಕೆ ಸ್ಟ್ರಾಟೊಸ್ಫಿಯರ್(ಸ್ಟ್ರಾಟೊ=ಸ್ತರ) ಅಥವಾ ಸ್ತರಮಂಡಲ ಎಂಬ ಹೆಸರು ಕೊಟ್ಟ.  ಇಪ್ಪತ್ತನೆಯ ಶತಮಾನದಲ್ಲಿ ಕ್ಷಿಪಣಿಗಳ ನೆರವಿನಿಂದ ನಡೆಸಿರುವ ಸಂಶೋಧನೆಗಳು ಈ ಪ್ರದೇಶದ ಸ್ತರರಚನೆಯನ್ನು ಸಮರ್ಥಿಸಿಲ್ಲ (1975). ಆದರೂ ಟೆಸ್‍ರಾನ್ ಕೊಟ್ಟ ಹೆಸರು ಹಾಗೇ ಉಳಿದಿದೆ.  1913 ರ ಜನವರಿ 2ರಂದು ಟೆಸ್‍ರಾನ್ ಗತಿಸಿದ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ